ಗ್ಲಾಬ್ಯುಲಿನ್ -
ರಕ್ತದ ವಸೆಯಲ್ಲೂ ಹಾಲೊಡಕಿನಲ್ಲೂ (ಮಸ್ತಿ) ಇರುವ ಒಂದು ಬಗೆಯ ಪ್ರೋಟೀನು ಸಂಯುಕ್ತ. ಹಾಲಿನಲ್ಲಿರುವ ಗ್ಲಾಬ್ಯುಲಿನ್ನಿಗೆ ಲ್ಯಾಕ್ಟೊಗ್ಲಾಬ್ಯುಲಿನ್ ಎಂಬ ಹೆಸರೂ ಇದೆ. ಹಾಲೊಡಕಿನಲ್ಲಿ ಇದರ ಮೊತ್ತ 0.1%ನ್ನು ಮೀರುವುದಿಲ್ಲ. ಆದರೆ ಅದೇ ತಾನೆ ಕರುಹಾಕಿದ ಹಸುವಿನ ಹಾಲಿನಲ್ಲಿ ಮಾತ್ರ ಇದರ ಮೊತ್ತಗಣನೀಯವಾಗಿರುತ್ತದೆ. (ಇನ್ನೊಂದು ಬಗೆಯ ಪ್ರೋಟೀನಾದ ಆಲ್ಬ್ಯುಮಿನ್ನೂ ಸೇರಿ ಇದರ ಮೊತ್ತ 11%-12% ರಷ್ಟಿರಬಹುದು). 24 ಗಂಟೆಗಳ ಅನಂತರ ಈ ಪರಿಮಾಣ ಶೀಘ್ರವಾಗಿ ಇಳಿದುಹೋಗುತ್ತದೆ. ತಾಯಿ ಅನೇಕ ಬಗೆಯ ರೋಗಗಳ ವಿರುದ್ಧ ಪ್ರತಿವಸ್ತುಗಳ (ಆ್ಯಂಟಿಬಾಡೀಸ್) ತಯಾರಿಕೆಯಲ್ಲಿ ಗ್ಲಾಬ್ಯುಲಿನ್ ಪ್ರಮುಖ ಪಾತ್ರ ವಹಿಸುತ್ತದೆ. ಇಂಥ ಪ್ರತಿವಸ್ತುಗಳು ಹೆಚ್ಚು ಮೊತ್ತದಲ್ಲಿರುವ ತಾಯಿಯ ಹಾಲನ್ನು ಕರುಗಳು ಕುಡಿದಾಗ ಅವಕ್ಕೂ ತಾತ್ಕಾಲಿಕ ಬಗೆಯ ರೋಗನಿರೋಧಕಗಳ ಸಾಮಥ್ರ್ಯ ಬರುತ್ತದೆ.

ಗ್ಲಾಬ್ಯುಲಿನ್ನಿನಲ್ಲಿ ಆಲ್ಫ, ಬೀಟ್, ಗ್ಯಾಮ್ ಎಂಬ ಮೂರು ಮುಖ್ಯ ಬಗೆಗಳಿವೆ. ಇವನ್ನು ವಿದ್ಯುತ್‍ಕ್ಷೇತ್ರ ಚಲನದಿಂದ (ಎಲೆಕ್ಟ್ರೊಫೋರೆಸಿಸ್) ಬೇರ್ಪಡಿಸಿ ಗುರುತಿಸಲಾಗಿದೆ. ಇವುಗಳ ಒಂದೊಂದು ಬಗೆಯಲ್ಲೂ ಅನೇಕ ರೀತಿಯ ಪ್ರೋಟೀನುಗಳಿವೆ. ಉದಾಹರಣೆಗೆ ಆಲ್ಫ ಬಗೆಯಲ್ಲಿ ಹ್ಯಾಪ್ಟೊಗ್ಲಾಬಿನ್, ಸೆರುಲೋಪ್ಲಾಸ್ಮಿನ್, α2 ಮ್ಯಾಕ್ರೊಗ್ಲಾಬ್ಯುಲಿನುಗಳೂ ಬೀಟ ಗ್ಲಾಬ್ಯುಲಿನುಗಳಲ್ಲಿ ಟ್ರಾನ್ಸ್‍ಫರಿನ್, ಬೀಟ ಲೈಪೋಪ್ರೋಟೀನುಗಳೂ ಗ್ಯಾಮ ಗ್ಲಾಬ್ಯುಲಿನುಗಳಲ್ಲಿ 5 ರೀತಿಯ ಇಮ್ಯೂನೋ ಗ್ಲಾಬ್ಯುಲಿನುಗಳೂ ಇವೆ.
(ಪಿ.ಎಸ್.ಆರ್.ಎ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ